ಕೀಲುರಿತ

 ದೇಹದ ಯಾವುದೇ ಕೀಲಿನ ಸೋಂಕಿನ ಪರಿಣಾಮ (ಆರ್ಥೈಟಿಸ್).  ಸಂಧಿವಾತ ಪರ್ಯಾಯ ಪದ.  ಬೇರೆ ಬೇರೆ ಕಾರಣಗಳ ಪರಿಣಾಮವಾಗಿ ತಲೆದೋರುವ ನೋವಿನ ಅನುಭವವಿದು.  ಮಾನವದೇಹದಲ್ಲಿರುವ ಕೀಲುಗಳು ಹಲವಾರು, ಹಲವಾರು ಬಗೆಯವು.  ಇವುಗಳಲ್ಲಿ (ಕಾರ್ಟಿಲೇಜ್) ತಂತುಗಟ್ಟು (ಲಿಗಮೆಂಟ್) ಮತ್ತು ಸ್ನಾಯುರಜ್ಜು (ಟೆಂಡನ್) ಮುಖ್ಯವಾದವು.  ಮೂಳೆಯ ಒಂದು ಭಾಗ ಇನ್ನೊಂದು ಮೂಳೆಯ ಭಾಗದೊಂದಿಗೆ ಕೂಡಿ ತಿರುಗಲು ಸಹಾಯವಾಗುವಂತೆ ಕೀಲುಗಳ ರಚನೆ ಉಂಟು.  ತಿರುಗುವ ಭಾಗವನ್ನು ಮೃದ್ವಸ್ಥಿಗಳಿಂದ ಮಾಡಿದೆ.  ಅಲ್ಲದೆ ಈ ಭಾಗ ಸರಾಗವಾಗಿ, ಚಲಿಸಲು ಸಹಾಯವಾಗುವಂತೆ ಬಲು ನುಣುಪಾಗಿರುತ್ತದೆ.  ಮೂಳೆಗಳು ಒಂದಕ್ಕೊಂದು ಹೊಂದಿಕೊಂಡು ತಿರುಗುವಾಗ ವಿಶೇಷ ಘರ್ಷಣೆಗೊಳಗಾಗದಂತೆ ಕೀಲಿನೊಳಗೆ ಸಿನೋವಿಯಲ್ ಎಂಬ ಹೆಸರಿನ ದ್ರವವಿದೆ.  ಮೃದ್ವಸ್ಥಿ, ಸ್ನಾಯುರಜ್ಜು ಮತ್ತು ತಂತುಗಟ್ಟುಗಳೆಲ್ಲವೂ ಕೀಲಿನ ಭಾಗದಲ್ಲಿ ಕೀಲಿನ ಪೊರೆಯಿಂದ (ಜಾಯಿಂಟ್ ಕ್ಯಾಪ್ಸೂಲ್) ಆವರಿಸಲ್ಪಟ್ಟರುತ್ತವೆ.  ಕೆಲವು ಕೀಲುಗಳಲ್ಲಿ ಚಲನೆ ವಿಶೇಷವಾಗಿರುತ್ತದೆ (ಉದಾಹರಣೆಗೆ ಬೆನ್ನುಲುಬಿನ ಕೀಲು ಮತ್ತು ಬೆನ್ನೆಲುಬು ಮತ್ತು ತೊಡೆಯ ಕೀಲಿರುವ ಮೂಳೆಯಲ್ಲಿನ ಇತರ ಕೀಲುಗಳು).  ಕೀಲಿನ ಪೊರೆಯೊಳಗಾಗಲಿ ಕೀಲಿನ ಯಾವುದಾದರೂ ಭಾಗಕ್ಕೆ ಗಾಯವಾದಾಗ ಅಥವಾ ವ್ಯಾಪಿಸಿದ ಯಾವುದಾದರೂ ರೋಗದ ಸೋಂಕಿನಿಂದುಂಟಾದ ವಿಷವಸ್ತುಗಳು ವ್ಯಾಪಿಸಿದಾಗ ಕೀಲುರಿತ ಉಂಟಾಗಬಹುದು.   ಕಾರಣ ಯಾವುದೇ ಇರಲಿ ಕೀಲುರಿತ ಉಂಟಾದಾಗ ಅದರ ಕಾರಣಕ್ಕೆ ಅನುಸಾರವಾಗಿ ಕೀಲಿನೊಳಗಿನ ದ್ರವ ಪದಾರ್ಥ ಹೆಚ್ಚಾಗಿ ಕೀಲಿನಲ್ಲಿ ಊತ ಕಾಣಿಸಿಕೊಳ್ಳಬಹುದು.  ಸ್ನಾಯುರಜ್ಜು ಅಥವಾ ತಂತುಗಟ್ಟುವಿನಲ್ಲಿ ಉರಿ ಕಾಣಿಸಿಕೊಂಡು ಕೀಲಿನ ಚಲನೆಯನ್ನು ಅಡ್ಡಿಪಡಿಸಿ ನೋವನ್ನು ಉಂಟುಮಾಡಬಹುದು. ಮೃದ್ವಸ್ಥಿಗಳಿಂದ ಕೂಡಿ ನುಣುಪಾದ ಭಾಗ ನಶಿಸಿ ಒರಟಾಗಿ ಕೀಲುಗಳು ಸರಾಗವಾಗಿ ತಿರುಗದಂತೆ ಅಡ್ಡಿಪಡಿಸಿ ನೋವನ್ನುಂಟುಮಾಡಬಹುದು.  ಕೀಲಿನಲ್ಲಿ ಕಾಣಿಸಿದ ಉರಿ ಕ್ರಮೇಣ ಅತಿರೇಕವಾಗಿ ಮೂಳೆಗಳು ಒಂದಕ್ಕೊಂದು ಕೂಡಿಕೊಂಡು ಕೀಲಿನಲ್ಲಿ ಚಲನೆಯೇ ಇಲ್ಲದಂತಾಗಬಹುದು.  ಕೀಲಿನ ಪೊರೆಯೊಳಗಿರುವ ರಕ್ತನಾಳಗಳಿಂದ ರಕ್ತಸ್ರಾವಾಗಿ ಕೀಲಿನ ಪೊರೆಯೊಳಗೆ ರಕ್ತ ಸೇರಬಹುದು.

 ಕೀಲುರಿತದ ಲಕ್ಷಣಗಳು ಕೆಲವು ವೇಳೆ ಒಡನೆಯೇ ಕಂಡುಬರಬಹುದು ಅಥವಾ ಇನ್ನು ಕೆಲವು ವೇಳೆ ಕ್ರಮೇಣ ಕಂಡುಬರಬಹುದು.  ಕೆಲವು ತರಹ ಕೀಲುರಿತ ಒಂದೇ ಕೀಲಿನಲ್ಲಿ ಕಾಣಿಸಿಕೊಂಡರೆ ಇನ್ನೂ ಕೆಲವು ಅನೇಕ ಕೀಲುಗಳಲ್ಲಿ ಕಾಣಿಸಬಹುದು.  ಅಥವಾ ಕೆಲವು ಕೀಲುಗಳಲ್ಲಿ ಕಾಣಿಸಿಕೊಂಡು ಅದು ಕಡಿಮೆಯಾಗಿ ಅನಂತರ ಬೇರೆ ಕೀಲುಗಳಿಗೆ ವ್ಯಾಪಿಸಬಹುದು. ಈ ತರಹದ ಲಕ್ಷಣಗಳು ಕಾಣಿಸಿ ಕೊಳ್ಳುವುದು ರೋಗದ ಸೋಂಕಿನ ರೀತಿಯನ್ನೂ ಅವಲಂಬಿಸಿರುತ್ತದೆ. 

 ಲಿಂಗ, ವಯಸ್ಸು, ದೇಶದ ವಾಯುಗುಣ ಜನಜೀವನದ ಮಟ್ಟ ಮತ್ತು ಅವರ ಆಚಾರ ವ್ಯವಹಾರಗಳಿಗೆ ಅನುಗುಣವಾಗಿ ಕೀಲುರಿತ ಕಾಣಿಸಿಕೊಳ್ಳುವುದರಲ್ಲೂ ವ್ಯತ್ಯಾಸ ಕಂಡುಬರುತ್ತದೆ.  ಕೀಲುರಿತವನ್ನು ಮುಖ್ಯವಾಗಿ ನಾಲ್ಕುಭಾಗಗಳಾಗಿ ವಿಂಗಡಿಸಬಹುದು: 1 ಸಂಧಿವಾತ ಲಕ್ಷಣಗಳಿಂದ ಕೂಡಿದ ಕೀಲುರಿತ (ರ್ಹೂಮಟಾಯಿಡ್ ಆರ್ಥೈಟಿಸ್); 2 ನಿರ್ದಿಷ್ಟವಾದ ರೋಗದ ಸೋಂಕಿನಿಂದ ಉಂಟಾಗುವ ಕೀಲುರಿತ; 3 ಕೀಲಿನ ಭಾಗಗಳು ಯಾವುದೇ ಕಾರಣದಿಂದಾಗಲೀ ಬೇಗ ನಶಿಸಿ ಹೋಗಿ ಉಂಟಾಗುವ ಕೀಲುರಿತ (ಆಸ್ಟಿಯೋ ಆರ್ಥೈಟಿಸ್), 4 ಏಡಿಗಂತಿ ಮತ್ತು ಅದರ ದ್ವಿತೀಯಕಗಳು ಕೀಲುಗಳಿಗೆ ವ್ಯಾಪಿಸುವುದರಿಂದಲೂ ಇತರ ನಿರ್ಧಿಷ್ಟವಲ್ಲದ ಕಾರಣಗಳಿಂದಲೂ ಉಂಟಾಗುವ ಕೀಲುರಿತ.

 ರಮಟಾಯ್ಡ ಕೀಲುರಿತಕ್ಕೆ ಕಾರಣ ಗೊತ್ತಿಲ್ಲ ವಾದರೂ ಅದರ ಚಿಕಿತ್ಸೆಯಲ್ಲಿ ಅನೇಕ ಪರಿಣಾಮಕಾರಿ ಔಷಧಗಳು ಇಂದು ಲಭ್ಯವಾಗಿವೆ. ಈ ಕೀಲುರಿತದಿಂದಾಗ ಬಹುದಾದ ವಿಕಲತೆ ತಪ್ಪಿಸಲು ಸಹ ಔಷಧಗಳು ಸಹಾಯಕಾರಿಯಾಗಿವೆ.  ಜೀವಿರೋಧಕ (ಅಂಟಿಬಯಟಿಕ್) ಕಂಡುಕೊಂಡು ಬಳಕೆ ಪ್ರಾರಂಭವಾದ ಮೇಲೆ ಸೋಂಕು ರೋಗಗಳ ಹಾವಳಿ ಕಡಿಮೆಯಾಗಿದೆ.  ಕೀಲುಗಳು ಹಾಳಾಗುವುದು ಇಲ್ಲದಂತಾಗಿದೆ ಮತ್ತು ವಿಕಲತೆಯಿಂದ ಬಳಲುವುದು ತಪ್ಪಿದೆ. 

1 ಸಂಧಿವಾತ ಲಕ್ಷಣಗಳಿಂದ ಕೂಡಿದ ಕೀಲುರಿತ:  ಸಾಮಾನ್ಯವಾಗಿ ಇದು ಮಧ್ಯ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತದೆ.  ಇದಕ್ಕೆ ಗಂಡಸರಿಗಿಂತಲೂ ಹೆಂಗಸರೇ ಹೆಚ್ಚಾಗಿ ತುತ್ತಾದಾದರೂ ರೋಗದ ಸೋಂಕು ಶರೀರಕ್ಕೆ ತಗಲಿದಾಗ, ಶರೀರ ಪೋಷಣೆ ಸರಿಯಾಗಿಲ್ಲದಿರುವಾಗ ಅಥವಾ ಮನುಷ್ಯ ಮಾನಸಿಕ ಹೊಯ್ದಾಟಕ್ಕೆ ಗುರಿಯಾಗಿರುವಾಗ ಈ ರೋಗಲಕ್ಷಣ ಕಾಣಿಸಿಕೊಳ್ಳಬಹುದು.  ಹೆಂಗಸರಲ್ಲಿ ಮುಟ್ಟುನಿಂತ ಮೇಲೆ ಈ ಕಾಯಿಲೆ ಕಾಣಿಸಿಕೊಳ್ಳುವುದು ವಿರಳ.  ಈ ರೋಗ ಲಕ್ಷಣದಲ್ಲಿ ಉರಿತವೇ ಮುಖ್ಯವಾದುದು.  ಕೀಲಿನ ಸುತ್ತಮುತ್ತಲಿನ ಮೃದುವಾದ ಅಂಗಕಟ್ಟುಗಳಲ್ಲಿ ಮೊದಲು ಉರಿತ ಕಾಣಿಸಿಕೊಳ್ಳತ್ತದೆ.  ಅನಂತರ ಅದು ನಶಿಸಿ ಮೂಳೆಗಳು ಒಂದಕ್ಕೊಂದು ತಿರುಗುವ ಭಾಗದಲ್ಲಿ ಕೂಡಿಕೊಂಡು ಬಿಡಬಹುದು.  ರೋಗಲಕ್ಷಣದ ಜೊತೆಯಲ್ಲೇ ಕಾಣಿಸಿಕೊಳ್ಳುವ ಸೆಳೆತ ಮತ್ತು ನೊವು ಕೀಲನ್ನು ಚಲಿಸದಂತೆ ಮಾಡುತ್ತವೆ.  ಕೆಲವು ವೇಳೆ ಮೂಳೆಗಳಲ್ಲಿ ಸುಣ್ಣದ ಅಂಶವೇ ಕಡಿಮೆಯಾಗಿಬಿಡುವುದೂ ಉಂಟು.  ಇದನ್ನು ಎಕ್ಸ್‍ಕಿರಣಗಳ ನೆರವಿನಿಂದ ಕಾಣಬಹುದು. ರಕ್ತದಲ್ಲಿ ಕಾಣಿಸಿಕೊಳ್ಳುವ ವ್ಯತ್ಯಾಸ. ರಕ್ತಹೀನತೆ ಸರ್ವೇ ಸಾಮಾನ್ಯ ಮತ್ತು ರಕ್ತ ಕಣಗಳು ದುಗ್ಧರಸದಲ್ಲಿ ಅತಿ ಬೇಗ ತಳಕ್ಕೆ ಹೋಗುತ್ತವೆ.  ಈ ಒಂದು ಗುಣ ರೋಗಲಕ್ಷಣವನ್ನು ತಿಳಿದುಕೊಳ್ಳಲೂ ಚಿಕಿತ್ಸೆ ನಡೆಸಿದಾಗ ರೋಗ ಗುಣವಾಗುತ್ತಿರುವ ಮಟ್ಟವನ್ನು ತಿಳಿಯಲೂ ಸಹಾಯಮಾಡುತ್ತದೆ.  ಈ ತರಹದ ಕೀಲುರಿತ ಆರಂಭವಾಗುವಾಗ ಅಂಥವರಲ್ಲಿ ತೂಕ ಕಡಿಮೆಯಾಗುವುದು.  ನಿಶ್ಯಕ್ತಿ, ಮಾನಸಿಕ ಹೊಯ್ದಾಟ, ಬೇಸರ ಇವೆಲ್ಲ ಉಂಟಾಗಬಹುದು.  ಕೈಯಲ್ಲಿನ ಬೆರಳಿಗೂ ಹಸ್ತಕ್ಕೂ ಹೊಂದಿಕೊಂಡಿರುವ ಎರಡನೆಯ ಕೀಲಿನಲ್ಲಿ (ಎರಡನೆಯ ಮೆಟಕಾರ್ಪೆಲ್ ಕೀಲು)  ವಿಶೇಷವಾಗಿ ನೋವು ಊತ ಮೊದಲು ಕಾಣಿಸಿಕೊಳ್ಳತ್ತವೆ.  ಪಾದದಕೀಲಿನಲ್ಲೂ (ಮೆಟಟಾರ್ಸಲ್ ಜಾಯಿಂಟ್) ಕಾಣಿಸಿಕೊಳ್ಳಬಹುದು.  ಅನಂತರ ಕೈಕಾಲಿನ ಮಾಂಸಖಂಡಗಳಲ್ಲಿ ಅವುಗಳ ಗಾತ್ರ ಕಮ್ಮಿಯಾಗಿ ಶಕ್ತಿ ಕುಗ್ಗಿ ಕೀಲಿನ ಚಲನವಲನಗಳಿಗೆ ಅಡ್ಡಿ ಆತಂಕ ಉಂಟಾಗಬಹುದು.  ಅನಂತರ ಕೀಲುರಿತ ಮೊಣಕೈ, ಮೊಣಕಾಲು, ಮಂಡಿ, ತೋಳು, ಭುಜ, ತೊಡೆ- ಈ ಕೀಲುಗಳಿಗೂ ಹರಡಬಹುದು.  ಹೀಗೆಲ್ಲ ಆಗುತ್ತಿರುವಾಗ ಕೀಲಿಗೆ ಕೂಡಿಕೊಂಡಿರುವಂತೆ ಅದರ ಸುತ್ತ ಊತ ಕಾಣಿಸಿಕೊಳ್ಳ್ಳುತ್ತದೆ.  ಇಷ್ಟೆಲ್ಲ ಆದರೂ ಕೀಲುಗಳು ಒಡನೆಯೇ ನಿರುಪಯುಕ್ತವಾಗುವುದಿಲ್ಲ.  ಹಾಗಾಗಲು ಕೆಲವಾರು ವರ್ಷಗಳೇ ಹಿಡಿಯುತ್ತವೆ.  ಆದರೆ ಈ ತರಹದ ಕೀಲುರಿತದಿಂದ ಅದು ಪ್ರಾರಂಭವಾದಂದಿನಿಂದಲೇ ಶರೀರದ ನೆಮ್ಮದಿಗೆ ಭಂಗ ಉಂಟಾಗುತ್ತದೆ.  ಈ ರೋಗಲಕ್ಷಣದ ಇನ್ನೊಂದು ವಿಚಿತ್ರವೆಂದರೆ ಹೆಂಗಸು ಗರ್ಭಿಣಿಯಾದಾಗ ಇಲ್ಲವೇ ಮನುಷ್ಯನಿಗೆ ಕಾಮಾಲೆ ರೋಗ ತಗಲಿದಾಗ ರೋಗ ವಾಸಿಯಾದ ಹಾಗೆ ಆಗಿ ಪ್ರಸವವಾದಮೇಲೆ ಅಥವಾ ಕಾಮಾಲೆ ರೋಗ ವಾಸಿಯಾದ ಮೇಲೆ ಇದು ಮರುಕಳಿಸುತ್ತದೆ. 

 ಈ ರೋಗ ತಗಲಿದವರ ಪೈಕಿ 20% ರಷ್ಟು ಜನಕ್ಕೆ ಸಂಪೂರ್ಣ ಗುಣವಾಗಬಹುದು.  50%ರಷ್ಟು ಜನಕ್ಕೆ ಸಾಮಾನ್ಯ ಗುಣ ಕಾಣಬಹುದು.  20% ರಷ್ಟು ಜನರಲ್ಲಿ ಕೀಲುಗಳು ಸ್ವಲ್ಪವಾದರೂ ಉಪಯೋಗವಾಗುವಷ್ಟು ಗುಣ ಕಾಣಬಹುದು.  ಇನ್ನುಳಿದ 10% ರಷ್ಟು ಜನರಿಗೆ ಎಷ್ಟೇ ಚಿಕಿತ್ಸೇ ನಡೆಸಿದಾಗಲೂ ಉಪಚರಿಸಿದಾಗಲೂ ಅವರು ಗುಣ ಹೊಂದಲಾರರು ಎಂದು ಅಂಕಿ ಅಂಶಗಳ ಆಧಾರದಿಂದ ತಿಳಿದು ಬಂದಿದೆ.  ಈ ರೋಗಕ್ಕೆ ಚಿಕಿತ್ಸೆ ಅನೇಕ ತಿಂಗಳುಗಳು ಅಥವಾ ವರ್ಷಗಳೇ ಬೇಕಾಗುತ್ತದೆ.  ರೋಗ ಮರುಕಳಿಸುವುದು ಸರ್ವೇ ಸಾಮಾನ್ಯವಾದ್ದರಿಂದ ಸರಿಯಾದ ಕಾಲದಲ್ಲಿ ಎಚ್ಚರಿಕೆ ವಹಿಸಿ ಚಿಕಿತ್ಸೆ ನಡೆಸದಿದ್ದರೆ ಕೀಲುಗಳು ಯಾವ ರೀತಿಯಲ್ಲೂ ಉಪಯೋಗಕ್ಕೆ ಬಾರದೆ ಮನುಷ್ಯ ಜೀವನವೇ ಹಾಳಾಗಬಹುದು.  ಈ ರೋಗಕ್ಕೆ ಅನೇಕ ತರಹದ ಚಿಕಿತ್ಸೆಗಳಿದ್ದರೂ ನಿರ್ದಿಷ್ಟವಾದ ಯಾವ ಚಿಕಿತ್ಸಾಕ್ರಮವೂ ಇದುವರೆಗೂ ಗೊತ್ತಾಗಿಲ್ಲ. 

2 ನಿರ್ದಿಷ್ಟವಾದ ರೋಗದ ಸೋಂಕಿನಿಂದ ಉಂಟಾಗುವ ಕೀಲುರಿತ: ಇವುಗಳಲ್ಲಿ ರೋಗಜನಕ ಏಕಾಣುಜೀವಿಗಳಾದಂಥ ಗೋನೋಕಾಕೈ.  ಮೆನಿಂಗೋಕಾಕೈ.  ಕ್ಷಯ ರೋಗಾಣು, ವಿಷಮಶೀತ ಜ್ವರಾಣು, ಆಮಶಂಕೆಯ ರೋಗಾಣುಗಳಿಂದುಂಟಾಗುವ ವ್ಯಾಧಿಗಳು ಸೇರಿವೆ.  ಇವು ದೇಹದಲ್ಲಿ ಕಾಣಿಸಿಕೊಂಡು ಕೆಲವುಕಾಲದ ಮೇಲೆ ರೋಗದ ಸೋಂಕು ಕೀಲುಗಳಿಗೂ ಹರಡಿಕೊಂಡು ಕೀಲುರಿತ ಉಂಟಾಗಬಹುದು.  ಗೊನೋರಿಯಾ ರೋಗಕ್ಕೆ ತುತ್ತಾದವರಲ್ಲಿ 1%-5% ರಷ್ಟು ಜನ ಈ ರೋಗದ ಸೋಂಕಿನ ಕೀಲುರಿತಕ್ಕೆ ತುತ್ತಾಗುತ್ತಾರೆ.  ಇವರಲ್ಲಿ ಹೆಂಗಸರಿಗಿಂತ ಗಂಡಸರ ಸಂಖ್ಯೆಯೇ ಹೆಚ್ಚು.  ಈ ರೋಗಕ್ಕೆ ತುತ್ತಾದವರ ಕಣ್ಣುಗಳಲ್ಲಿ ಕೂಡ ಒಂದೊಂದು ಸಲ ರೋಗದ ಸೋಂಕು ಕಾಣಿಸಿಕೊಳ್ಳುತ್ತದೆ.   ಈ ತರಹಕೀಲುರಿತ ಸಾಮಾನ್ಯವಾಗಿ ಮಂಡಿ, ಮೊಣಕೈ, ಮೊಣಕಾಲು, ಮುಂತಾದ ಕೀಲುಗಳಲ್ಲಿ ಕಾಣಿಸಿಕೊಳ್ಳುತ್ತದೆ. 

 ಮೆನಿಂಗೋಕಾಕೈನಿಂದುಂಟಾಗುವ ಕೀಲುರಿತದಲ್ಲಿ ಮಿದುಳಿಗೆ ಈ ರೋಗಾಣು ಸೋಂಕಿದಾಗ ಸೆರಿಬ್ರೋಸ್ಪೈನಲ್ ಜ್ವರ  ಉಂಟಾಗುತ್ತದೆ.  ಹೀಗಾದ ಎರಡನೆಯವಾರದ  ಹೊತ್ತಿಗೆ ಕೀಲುರಿತ ಮಂಡಿ, ಮೊಣಕೈ, ಮೊಣಕಾಲಿನಲ್ಲಿ ಕಾಣಿಸಿಕೊಳುತ್ತದೆ.  ಈ ರೋಗದ ಸೋಂಕು ಕೀಲುಗಳನ್ನು ನೇರವಾಗಿ ವ್ಯಾಪಿಸಿಯೂ ಕೀಲುರಿತ ಉಂಟಾಗಬಹುದು.  ಹಾಗಾದಾಗ ಕೀಲಿನಲ್ಲಿ ನೋವು ಸೆಳೆತ ಮಾತ್ರ ಕಾಣಿಸಿಕೊಂಡು ಬಾಕಿ ರೀತಿಯಲ್ಲಿ ದೇಹಕ್ಕೆ ಯಾವ ವಿಧವಾದ ತೊಂದರೆಯೂ ಆಗದೆ ಇರಬಹುದು.  ರಕ್ತದಲ್ಲಿನ ಬಿಳಿರಕ್ತಕಣಗಳು ಕಡಿಮೆಯಾಗಿಬಿಡುವುದೂ ಈ ರೋಗದ ಒಂದು ಲಕ್ಷಣ. 

 ನ್ಯೂಮೋಕಾಕೈನಿಂದುಂಟಾಗುವ ಕೀಲುರಿತ: ನ್ಯೂಮೋನಿಯಾ ರೋಗದಿಂದ ನರಳುತ್ತಿರುವವರಲ್ಲಿ ಒಂದೊಂದು ಸಲ ವಿರಳವಾಗಿ ಈ ಕೀಲುರಿತ ಕಾಣಿಸಿಕೊಳ್ಳಬಹುದು.  ಇದು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿ ತೊಡೆ, ಭುಜ ಅಂಥ ದೊಡ್ಡಕೀಲುಗಳಲ್ಲೇ.  ನ್ಯೂಮೋನಿಯಾ ರೋಗದಿಂದ ಚೇತರಿಸಿಕೊಳ್ಳುತ್ತಿರುವ ರೋಗಿಗಳಲ್ಲಿ ಹೆಚ್ಚಾಗಿ ಕೀಲುರಿತ ಉಂಟಾಗುವುದುಂಟು. ಮತ್ತು ಕೀಲಿನೊಳಗಿನ ದ್ರವಪದಾರ್ಥ ಹೆಚ್ಚಾಗಿ ಊತವೂ ಕಾಣಿಸಿಕೊಳ್ಳುವುದುಂಟು.  ಕೀಲಿನೊಳಗಿನ ದ್ರವಪದಾರ್ಥವನ್ನು ಆಗ ಪರೀಕ್ಷಿಸಿದರೆ ಅದರಲ್ಲಿ ನ್ಯೂಮೋಕಾಕೈ ರೋಗಾಣುಗಳನ್ನು ಕಾಣಬಹುದು. 

 ಕ್ಷಯ ರೋಗಾಣುವಿನಿಂದ ಉಂಟಾಗುವ ಕೀಲುರಿತ ಕಾಣಿಸಿಕೊಳ್ಳುವದು ಹೇಗೆ ನಿಧಾನವೋ ಹಾಗೆ ಚಿಕಿತ್ಸೆ ನಡೆಸಿದಾಗ ಅದು ವಾಸಿಯಾಗುವುದೂ ಬಹಳ ನಿಧಾನ.  ಒಂದು ಸಲ ಈ ರೋಗ ಕೀಲಿಗೆ ವ್ಯಾಪಿಸಿ ಕೀಲುರಿತ ಉಂಟಾದಾಗ ಕೀಲುಗಳಲ್ಲಿ ಯಾವ ಊನವೂ ಇಲ್ಲದೆ ಸಂಪೂರ್ಣ ವಾಸಿಯಾಗುವುದು ಬಹಳ ಅಪರೂಪ. ಇದು  ದೇಹದ ಯಾವ ಕೀಲನ್ನು ಬೇಕಾದರೂ ಸೋಂಕುತ್ತದೆ.  ಬೆನ್ನೆಲುಬು ತೊಡೆ ಎಲ್ಲ ರೀತಿಯಲ್ಲಿ ಗುಣ ಕಂಡರೂ ಕೀಲುಗಳು ಮೊದಲಿನಂತೆಯೇ ಉಪಯೋಗಕ್ಕೆ ಬರುವುದು ಅಪರೂಪ.  ಇದು ಚಿಕಿತ್ಸೆಯನ್ನು ಪ್ರಾರಂಭಿಸುವುದಕ್ಕೂ ರೋಗ ಕಾಣಿಸಿ ಕೊಳ್ಳುವುದಕ್ಕೂ ಇರುವ ಕಾಲದ ಅಂತರವನ್ನು ಅವಲಂಬಿಸುತ್ತದೆ. 

 ವಿಷಮಶೀತಜ್ವರ, ಆಮಶಂಕೆ ಮುಂತಾದ ರೋಗಗಳ ಸೋಂಕು ಮೊದಲು ದೇಹದಲ್ಲಿ ಕಾಣಿಸಿಕೊಂಡು ರೋಗ ಮುಂದುವರಿಯುತ್ತಿರುವಾಗ ಅಥವಾ ಮನುಷ್ಯ ರೋಗದಿಂದ ಚೇತರಿಸಿಕೊಳ್ಳುತ್ತಿರುವಾಗ ಕೀಲುರಿತ ಕಾಣಿಸಿಕೊಳ್ಳುತ್ತದೆ.  ಇದಕ್ಕೆ ಆಯಾ ರೋಗಾಣುಗಳಿಂದುಂಟಾಗುವ ವಿಷವಸ್ತುಗಳೂ ಕಾರಣವಾಗಬಹುದು.

 ಸ್ಟ್ರೆಪ್ಪೊಕಾಕೈ, ಸ್ಟೆಫಿಲೋಕಾಕೈ ಮುಂತಾದ ಕಾಕೈ ಗುಂಪಿಗೆ ಸೇರಿದ ರೋಗಾಣುಗಳು ಕಿವಿ, ಗಂಟಲುಮೂಳೆ ಅಥವಾ ದೇಹದ ಇನ್ನಿತರ ಭಾಗಗಳಲ್ಲಿ ಸೋಂಕಿರುವಾಗ ಅದು ಕೀಲುಗಳನ್ನೂ ವ್ಯಾಪಿಸಿ ಕೀಲುರಿತ ಉಂಟಾಗಬಹುದು.  ಈ ರೀತಿಯ ಕೀಲುರಿತದಲ್ಲಿ ವಿಶೇಷವಾಗಿ ಹೆಚ್ಚು ಜ್ವರಬರುವುದು, ಚಳಿಯಾಗುವುದು, ಬೆವರುವುದು, ಮತ್ತು ಕೀಲಿನಲ್ಲಿ ಅತ್ಯಂತ ನೋವು ಕಾಣಿಸಿಕೊಳ್ಳುವುದು ಮತ್ತು ಊತ ಕಾಣಿಸಿ ಕೊಳ್ಳುವುದು ವಾಡಿಕೆ.  ಆಗ ಕೀಲಿನ ಚಲನೆಗೆ ಬಹಳವಾಗಿ ಅಡ್ಡಿಯುಂಟಾಗಿಬಿಡುತ್ತದೆ. ಹೀಗಾಗಿರುವಾಗ ರಕ್ತದಲ್ಲಿರುವ ಬಿಳಿರಕ್ತಕಣಗಳು ಬಹಳವಾಗಿ ಹೆಚ್ಚಾಗಿರುತ್ತವೆ.  ಕೀಲಿನೊಳಗಿನ ದ್ರವಪದಾರ್ಥ ಕ್ರಮೇಣ ಕೀವಿನಿಂದೊಡಗೂಡುವುದು. ಈ ಕೀಲುರಿತವನ್ನು ಬೇಗ ಚಿಕಿತ್ಸೆಗೆ ಒಳಪಡಿಸದಿದ್ದರೆ ಕೀಲಿನೊಳಗೆ ಸೇರಿರುವ ಕೀವು ಕೀಲಿನೊಳಗಿನ ಭಾಗಗಳನ್ನುನಾಶಪಡಿಸಿ ಕೀಲುಗಳನ್ನು ಯಾವ ರೀತಿಯೂ ಉಪಯೋಗಕ್ಕೆ ಬಾರದಂತೆ ಮಾಡಿಬಿಡುತ್ತದೆ.  ಈ ರೀತಿಯ ಕೀಲುರಿತಗಳಲ್ಲಿ ಅವಕ್ಕೆ ಕಾರಣವಾದ ರೋಗಾಣು ನಿರ್ದಿಷ್ಟವಾಗಿ ಗೊತ್ತಾಗುವುದರಿಂದ ಸರಿಯಾದ ಚಿಕಿತ್ಸಾ ಕ್ರಮವೆಂದರೆ ಜೀವಿರೋಧಕ ಔಷಧಿಗಳು, ವಿಶ್ರಾಂತಿ, ಶುಶ್ರೂಷೆ.  ಸರಿಯಾದ ಜೀವಸತ್ವಗಳಿಂದ ಕೂಡಿದ ಆಹಾರ ಮತ್ತು ಕೀಲುಗಳಿಗೂ ಸರಿಯಾದ ಉಪಶಮನದ ಆರೈಕೆ.  ಚಿಕಿತ್ಸೆ ನಿಧಾನವಾದಷ್ಟೂ ಈ ರೀತಿಯ ಕೀಲುರಿತದಿಂದ ಕೀಲುಗಳಿಗೆ ಅಪಾಯ ತಪ್ಪಿದ್ದಲ್ಲ.

3. ಕೀಲಿನ ಭಾಗಗಳು ನಶಿಸಿಹೋಗಿ ಉಂಟಾಗುವ ಕೀಲುರಿತ:  ಇದು ಸಾಮಾನ್ಯವಾಗಿ ಇಳಿವಯಸ್ಸಿನಲ್ಲಿ ಕಾಣಿಸಿಕೊಳ್ಳುವುದೇ ಹೆಚ್ಚು.  ಇದಕ್ಕೆ ಕಾರಣಗಳೂ ಅನೇಕ.  ಹುಟ್ಟಿದಂದಿನಿಂದಲೇ ಕೀಲಿನಲ್ಲಿರುವ ಕೆಲವು ದೋಷಗಳು, ಚಯಾಪಚಯದಲ್ಲಿ ದೋಷವುಂಟಾಗುವಿಕೆ (ಉದಾಹರಣೆಗೆ ಯೂರಿಕ್ ಆಮ್ಲ ಎನ್ನುವ ರಾಸಾಯನಿಕ ವಸ್ತು ದೇಹದಲ್ಲಿ ಜಾಸ್ತಿ ಸೇರಿದಾಗ ಗೌಟ್ ಎನ್ನುವ ಕೀಲುರಿತ ಉಂಟಾಗುತ್ತದೆ), ನರಗಳ ದುರ್ಬಲತೆ, ಯಾವುದಾದರೂ ದೀರ್ಘಾವಧಿಯ ಖಾಯಿಲೆಯಿಂದ ಉಂಟಾದ ವಿಷವಸ್ತುಗಳು ಅಥವಾ ವಂಶಪಾರಂಪರ್ಯದಿಂದ ಬಂದಿರುವ ಕಾರಣಗಳೂ ಇರಬಹುದು.   ಈತರಹದ ಕೀಲುರಿತ ಸಾಮಾನ್ಯವಾಗಿ ಯಾರು ಹೆಚ್ಚು ದೇಹಶ್ರಮ ಪಟ್ಟಿರುತ್ತಾರೋ ಅವರ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು.  ಈ ನೋವಿನಿಂದಾಗಿ ಮನುಷ್ಯನ ಉದ್ಯೋಗಕ್ಕೆ ಅನುಸಾರವಾಗಿ ಯಾವ ಕೀಲುಗಳು ಅವನ ಉದ್ಯೋಗದಲ್ಲಿ ಹೆಚ್ಚು ಶ್ರಮವಹಿಸುತ್ತವೆಯೋ ಆ ಕೀಲುಗಳಲ್ಲಿ ಕೀಲುರಿತ ಉಂಟಾಗುತ್ತದೆ. ಇದರಿಂದ ಮಾಂಸಖಂಡಗಳಲ್ಲಿ ಶಕ್ತಿಕುಗ್ಗಿ ಆಯಾ ಕೀಲುಗಳ ಚಲನೆ ಸಮರ್ಪಕವಾಗಿ ನಡೆಯದೇ ಹೋಗಬಹುದು.  ಅಥವಾ ಮಾಂಸಖಂಡಗಳು ಸಂಕುಚಿತಗೊಂಡು, ಕೀಲಿನ ಚಲನೆಯಾದಾಗ ನೋವುಂಟಾಗಿ, ಅದರ ಚಲನೆಯೇ ಕಡಿಮೆಯಾಗಿಬಿಡಬಹುದು.

 ಈ ತರಹದ ಕೀಲುರಿತದಲ್ಲಿ ಕೀಲುನೊಳಗಿನ ದ್ರವ ಹೆಚ್ಚಾಗುವುದಿಲ್ಲ.  ಕೆಲವು ಸಲ ಕೀಲುಗಳಲ್ಲಿ ಯಾವ ತೊಂದರೆಯೂ ಗೊತ್ತಾಗದು.  ಕೇವಲ ಎಕ್ಸ್‍ಕಿರಣಗಳ ಸಹಾಹದಿಂದ ದೇಹವನ್ನು ಪರೀಕ್ಷೆ ಮಾಡುತ್ತಿರುವಾಗ ಕೀಲುರಿತದ ಲಕ್ಷಣಗಳು ಕೆಲವು ಕೀಲುಗಳಲ್ಲಿ ಕಂಡುಬರಬಹುದು.  ಈ ತರಹ ಲಕ್ಷಣ ಕಾಣಿಸುವುದು ಬೆನ್ನು ಮೂಳೆಯ ಕೀಲುಗಳಲ್ಲಿ ಸರ್ವೇ ಸಾಮಾನ್ಯ.  ಈ ಕೀಲುರಿತದಲ್ಲಿ ಮೂಳೆಗಳು ಒಂದಕ್ಕೊಂದು ಕೂಡಿಕೊಳ್ಳುವುದಿಲ್ಲ.  ತಿರುಗುವ ಮೃದ್ವಸ್ಥಿಯ ನುಣುಪಾದ ಭಾಗ ಮಾತ್ರ ಹಾಳಾಗಿಹೋಗಿ ಕೀಲುಗಳು ಸರಾಗವಾಗಿ ಚಲಿಸದಂತಾಗಿಬಿಡುತ್ತದೆ.  

 ಮನುಷ್ಯ ಉಳಿದೆಲ್ಲ ರೀತಿಯಲ್ಲಿ ಆರೋಗ್ಯವಂತನಾಗಿಯೇ ಕಾಣುತ್ತಿದ್ದರೂ ಕೀಲಿನಲ್ಲಿ ಸ್ವಲ್ಪ ನೋವು ಕಾಣಿಸಿಕೊಳ್ಳುವುದು, ಕೀಲಿಗೆ ಹೊಂದಿಕೊಂಡಿರುವ ಮಾಂಸಖಂಡಗಳಲ್ಲಿ ಸೆಳೆತ ಇವೇ ಮೊದಲಾದ ಲಕ್ಷಣಗಳು ಕೀಲುರಿತದಲ್ಲಿ ಸಾಮಾನ್ಯವಾದುದು. ಇದರಲ್ಲಿ ಯಾವ ನಿರ್ದಿಷ್ಟವಾದ ರೋಗದ ಸೋಂಕೂ ಗೊತ್ತಾಗುವುದಿಲ್ಲ.  ನೋವನ್ನು ಶಮನಮಾಡುವ ಔಷಧಗಳಿಂದ ತಾತ್ಕಾಲಿಕ ಪ್ರಯೋಜನ ಪಡೆಯಬಹುದು.  ಕೀಲುರಿತ ಕಾಣಿಸಿಕೊಂಡ ಮೇಲೆ ಚಲನೆ ಕಡಿಮೆಯಾದಷ್ಟೂ ರೋಗ ಮುಂದುವರಿಯಲು ಸಹಾಯವಾಗಿಬಿಡುವುದರಿಂದ ಈ ಕೀಲುರಿತ ಕಾಣಿಸಿಕೊಂಡವರು ನಿಗದಿಯಾದ ಕೆಲವು ವ್ಯಾಯಾಮ ಮಾಡುವುದು ಸೂಕ್ತ.  ಮುಂಗಾಲಿನ ಟಿಬಿಯಾ ಎಲುವಿನ ಮೇಲ್ಭಾಗ ಕೊಯ್ದು ಕೀಲಿನ ಅಸಮತೆ ನೀಗುವ ಶಸ್ತ್ರಕ್ರಿಯೆ ಮಧ್ಯವಯಸ್ಸಿನವರಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ ಮುಪ್ಪಿನವರಲ್ಲಿ ಮಂಡಿಕೀಲಿನೆಲುವು ಕೊಯ್ದೆಗೆದು ಅದರ ಸ್ಥಳದಲ್ಲಿ ಕೃತಕ ಕೀಲನ್ನು (ಸ್ಟೆನ್‍ಲೆಸ್ ಸ್ಟೀಲ್ ಮತ್ತು ಒತ್ತಡತಾಳುವ ಮೆತ್ತನ ವಿಶಿಷ್ಠ ಪಾಲಿಎಥಿಲಿನ್), ಜೋಡಿಸುವ ಶಸ್ತ್ರ ಕ್ರಿಯೆ ರೋಗಿಗೆ ನೋವಿನಿಂದ ಮುಕ್ತಿ ನೀಡುತ್ತದೆ. 

4 ಏಡಿಗಂತಿಯಿಂದ ಮತ್ತು ಇತರ ನಿರ್ದಿಷ್ಟವಲ್ಲದ ಕಾರಣಗಳಿಂದುಂಟಾದ ಕೀಲುರಿತ:  ಏಡಿಗಂತಿಯೇ ನೇರವಾಗಿ ಯಾವುದಾದರೂ ಕೀಲನ್ನು ವ್ಯಾಪಿಸಬಹುದು.  ಅಥವಾ ದೇಹದ ಬೇರೆ ಭಾಗದಲ್ಲಿ ಈ ಸೋಂಕು ಕಾಣಿಸಿಕೊಂಡು ಅನಂತರ ಬೇರೆ ಯಾವ ಕೀಲನ್ನು ಬೇಕಾದರೂ ವ್ಯಾಪಿಸಬಹುದು. ಚಯಾಪಚಯದಲ್ಲಿ ದೋಷವುಂಟಾಗಿ ಬರುವ ಕೀಲುರಿತದಲ್ಲಿ ಗೌಟ್ ಅನ್ನುವುದು ಮುಖ್ಯವಾದುದು. ಇದು ನ್ಯೂಕ್ಲಿಯೋ ಪ್ರೋಟೀನ್‍ನಲ್ಲಿರುವ ಪ್ಯೂರೀನ್ ಎಂಬ ಜೀವರಸಾಯನ ವಸ್ತುವಿನ ಚಯಾಪಚಯ ಸರಿಯಾಗಿ ನಡೆಯದೇ ಹೋದಾಗ ಯೂರಿಕ್ ಆಮ್ಲ ಅನ್ನುವ ಅಂಶ ರಕ್ತದಲ್ಲಿ ಹೆಚ್ಚಾಗಿಬಿಟ್ಟು ಅದು ಕೀಲಿನೊಳಗೆಲ್ಲ ಕಟ್ಟಿಕೊಂಡು ಕೀಲಿನ ಚಲನೆಗೆ ಅಡ್ಡಿಪಡಿಸಿ ಕೀಲುರಿತ ಉಂಟಾಗುತ್ತದೆ.  ಕಾಲಿನ ಹೆಬ್ಬರಳಿಗೆ ಹೊಂದಿಕೊಂಡಿರುವ ಕೀಲುಗಳಲ್ಲಿ ಕಾಣಿಸಿಕೊಳ್ಳುತ್ತದೆ.  ಈ ಲಕ್ಷಣ ಕಾಣುವುದು ಹೆಂಗಸರಿಗಿಂತ ಗಂಡಸರಲ್ಲೇ ಹೆಚ್ಚು.  ಇದು ವಂಶಪಾರಂಪರ್ಯವಾಗಿ ಬರುವ ಕಾಯಿಲೆಗಳಲ್ಲಿ ಒಂದು.  ಸಾಮಾನ್ಯವಾಗಿ ಮಧ್ಯವಯಸ್ಕರಲ್ಲಿ ಇದು ಕಾಣಿಸಿಕೊಳ್ಳುತ್ತದೆ.  ಕೆಲವು ಔಷಧಗಳಿಂದ ಈ ಕೀಲುರಿತದ ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಿದೆ.  ಏಡಿಗಂತಿಯಿಂದುಂಟಾದ ಕೀಲುರಿತ ಕೆಲವು ವೇಳೆ ಜೀವಕ್ಕೆ ಅಪಾಯ ಉಂಟುಮಾಡಿದರೆ ಇನ್ನು ಕೆಲವು ವಿಧವಾದ ಕೀಲುರಿತಗಳು ಮನುಷ್ಯನನ್ನು ಯಾವ ರೀತಿಯಲ್ಲೂ ಉಪಯೋಗವಿಲ್ಲದಂತೆ ಮಾಡಿಬಿಡುತ್ತವೆ.  ಚಿಕ್ಕ ಮಕ್ಕಳಲ್ಲಿ ಮಂಡಿ ಮೊಣಕಾಲು ಮತ್ತು ಕೈಯಲ್ಲಿನ ಕೀಲುಗಳಲ್ಲಿ ಕಾಣಿಸಿಕೊಳ್ಳುವ ಕೀಲುರಿತ ಪೂರ್ಣ ಗುಣವಾದರೂ ಕೆಲವು ಕಾಲದ ಮೇಲೆ ಇದರ ಪರಿಣಾಮವಾಗಿ ಹೃದಯಕ್ಕೆ ಧಕ್ಕೆಯಾಗಬಹುದು.  ಈ ತರಹದ ಕೀಲುರಿತ ಕೊಳಚೆ ಪ್ರದೇಶದಲ್ಲಿ ಬಡತನದಿಂದ ವಾಸಿಸುವ ಜನಗಳಲ್ಲೇ ಇಪ್ಪತ್ತು ಜನರಿಗೂಬ್ಬ ರಂತೆ ಒಂದಲ್ಲ ಒಂದು ತರಹ ಕೀಲುರಿತಕ್ಕೆ ತುತ್ತಾಗಿರುತ್ತಾನೆಂದು ತಿಳಿದುಬಂದಿದೆ.  ಇದರಿಂದಾಗಿ ಮನುಷ್ಯ ಬಾಕಿ ರೀತಿಯಲ್ಲಿ  ಆರೋಗ್ಯವಾಗಿ ಕಂಡು ಬಂದರೂ ಕೀಲುರಿತ, ಅದರ ನೋವು. ಅದರಿಂದುಂಟಾಗುವ ಅಡೆ ತಡೆಗಳು ಅವನ ಜೀವಿತದ ಉಪಯುಕ್ತವಾದ ಎಷ್ಟೋವೇಳೆಯನ್ನು ಕಸಿದುಕೊಂಡು ಬಿಡುತ್ತವೆ. 

      (ಎಚ್.ಆರ್.ಡಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ